Thursday, October 08, 2009

(ಸ)ಮೋಸ


"ಏನೂ...!? ತಿಂಡಿಯೇನ್ರಿ!!??" ಅಂತ ಬಾಯಿ ತಗದ್ರೇನು ಮತ್ತ? ಇದೂ ಒಂಥರ ಬಾಯಿ ತೆಗಿಯೋ ವಿಷಯಾನ ಬಿಡ್ರಿ. ಆದ್ರ ಇಲ್ಲೆ, ನಾವು ಬಾಯಿ ತೆಗಿಯೋದಕ್ಕಿಂತಾ ಮೊದ್ಲ, ಇನ್ನೊಬ್ರು ನಮ್ಮ ಬಾಯಿ ತೆಗಿಸಿರತಾರ. ಅಷ್ಟ ಫರಕ..

ಏನಾತು ಅಂದ್ರ -
ನಾ ಹೊಸದಾಗಿ ಬರಿಬೇಕಂದುಕೊಂಡಿದ್ದ ಲೇಖನಕ್ಕ ಏನು ಹೆಸರಿಡ್ಲಿ (ಇನ್ನೂ ಯಾವ ವಿಷಯದ ಬಗ್ಗೆ ಬರೀಬೇಕು ಅಂತ ನಿರ್ಧಾರ ಮಾಡಿರದಿದ್ದರೂ!!) ಅಂತ ವಿಚಾರ ಮಾಡ್ಕೋತ ಕಾರು ಓಡಿಸ್ಲಿಕತ್ತಿದ್ದೆ. ದೇವೇಗೌಡ ಪೆಟ್ರೋಲ್ ಬಂಕ ಸಿಗ್ನಲ್ಲಿನ್ಯಾಗ ಕೆಂಪು ಸಿಗ್ನಲ್ ನೋಡಿ, ಗಾಡಿ ನಿಲ್ಲಿಸಿದೆ. ಮೊನ್ನೆ ಮೊನ್ನೆಯಿಂದ ಅಲ್ಲೊಂದು ಸಮೋಸಾ ಅಂಗಡಿ ಚಾಲೂ ಆಗೇದ, ನೋಡಿರಬೇಕಲಾ ನೀವು... ರೋಡ ಮಗ್ಗಲದಾಗ? ಹೂಂ... ಅದ ಸಮೋಸಾ ಅಂಗಡಿ.. ಅದರಿಂದ ನಾಕಾರು ಹುಡಗೋರು ಸಮೋಸಾ ಹಿಡ್ಕೊಂಡು ಸಿಗ್ನಲ್ಲಿನ್ಯಾಗ ಮಾರ್ಲಿಕತ್ತಿದ್ರು.. ಅದರಾಗ ಒಬ್ಬ, ನನ್ನ ಗಾಡಿ ಖಿಡಕಿ ಹತ್ರ ಬಂದು, ಖಿಡಕಿ ಕಾಜಿಗೆ ಧಡಾ-ಧಡಾ ಅಂತ ಹೊಡದ.. ಲೇಖನದ ಗುಂಗಿನ್ಯಾಗಿದ್ದ ನಾನು, ಏನೂ ವಿಚಾರ ಮಾಡದ ಭರಾನ ಖಿಡಕಿ ಇಳಿಸಿದೆ.. ಇಲ್ಲೇ ಆದದ್ದು ನೋಡ್ರಿ ತಪ್ಪು.. ಅವ, ಸರಕ್ಕನ, ನಾಲ್ಕು ಸಮೋಸಾದ ಒಂದು ಪಾಕೀಟನ್ನ ನನ್ನ ಕಾರಿನ ಡ್ಯಾಶ್‍ಬೋರ್ಡಿನ ಮ್ಯಾಲಿಟ್ಟು, "ಇಪ್ಪತ್ತು ರೂಪಾಯಿ" ಅಂದ. ಸಂಜಿ ೫ ಗಂಟೆ ಆಗಿಹೋಗಿತ್ತು; ನನ್ನ ಹೊಟ್ಟಿನೂ, "ತೊಗೋ... ಇರ್ಲಿ" ಅಂತು. ಸರಿ, ಆತು ಅಂದುಕೊಂಡು ಕಿಶೇದಿಂದ ಐದನೂರರ ಒಂದು ನೋಟು ತೆಗೆದು ಅವನ ಕೈಗೆ ಕೊಟ್ಟೆ. ಅವ ಮತ್ತೇನೋ ನೋಡ್ಲಿಕತ್ತಿದ... "ಏಯ್, ಏನಾಯ್ತಪ್ಪ, ಬೇಗ ಚಿಲ್ರೆ ಕೊಡು, ಸಿಗ್ನಲ್ ಬಿಡ್ತಯಿದೆ" ಅಂದೆ. ಅವ, "ನೀವೆ ನನಗೆ ಇನ್ನು ಹತ್ತು ರುಪಾಯಿ ಕೊಡ್ಬೆಕು" ಅಂತ ತನ್ನ ಕೈ ತೋರಿಸಿದ.. ಅದ್ಯಾವಗಲೋ ಅವನ ಕೈಯಾಗಿದ್ದ ಐದುನೂರರ ನೋಟು, ಹತ್ತರ ನೋಟಾಗಿ ಬದ್ಲಾಗಿಬಿಟ್ಟಿತ್ತು!!!

"ಏ, ಇದೇನಪ್ಪ, ಈಗತಾನೆ ಐನೂರರ ನೋಟು ಕೊಟ್ನಲ್ಲ ನಿನಗೆ" ಅಂದ್ರೆ, ಅವ ಒಪ್ಲಿಕ್ಕೆ ತಯಾರ ಇಲ್ಲಾ!! "ನೀವು ನನಗ ಹತ್ತು ರುಪಾಯಿ ಮಾತ್ರ ಕೊಟ್ಟಿದ್ದು ಸಾರ್, ಇನ್ನು ಹತ್ತು ಕೊಡಿ; ಇಲ್ಲಾಂದ್ರೆ ಇಟ್ಕೊಳ್ಳಿ ನಿಮ್ಮ ಹತ್ತು ರೂಪಾಯಿ" ಅಂತ ಜೋರಾಗಿ ಹೇಳಿ, ಹತ್ತರ ನೋಟನ್ನ ನನ್ನ ಮುಂದ (ಮುಖದಮ್ಯಾಲ)  ಒಗದು, ಸಮೋಸಾ ಪಾಕೀಟನ್ನ ತೊಗೊಂಡ್ಬಿಟ್ಟ.

ಅವ ಹತ್ತು ಹನ್ನೆರಡರ ಹುಡುಗ. ಬೆಳಿಗಿನಿಂದ ಕೆಲಸ ಮಾಡಿ ಸೋತು ಸುಣ್ಣದಂಗಿದ್ದ (ಅಲ್ಲಿದ್ದ ಮಂದಿಗಂತೂ ಹಂಗ ಅನಿಸಿರಬೇಕು). ಮಂದಿ ನನ್ನ ಕಾರ್‍ ಸುತ್ತಲೂ ಸೇರ್ಲಿಕತ್ರು. ಒಬ್ಬ - "ನೋಡಿದ್ರ ಕಾರಿನಲ್ಲಿ ಬರ್ತಿರಿ, ದುಡದ ತಿನ್ನೋ ಹುಡಗರಿಗೆ ಮೋಸಾ ಮಾಡ್ತಿರಲ್ರಿ", ಅಂತ ಬುದ್ದಿ ಹೇಳಲಿಕ್ಕೆ ಸುರೂ ಮಾಡೇಬಿಟ್ಟ. ಸಿಗ್ನಲ್ಲು ಹಸಿರಾತು, ನಾನು ನನ್ನ ಕಾರು ಚಾಲೂ ಮಾಡಿ, ಎಕ್ಸೆಲರೇಟರ್ ತುಳಿದೆ.

ಹಿಂಗ ನಾಲ್ಕುನೂರಾ ತೊಂಭತ್ತು ರೂಪಾಯಿ ಖರ್ಚು ಮಾಡಿದಮ್ಯಾಲೇನ ನನಗ ಈ ಹೆಸರು ಸಿಕ್ಕಿತು ನೋಡ್ರಿ.. ಸ-ಮೋಸ.. ಇದನ್ನ ಬಿಡಿಸಿ ಬರೀರಿ ಅಂತ ಯಾರಿಗಾದ್ರು ಈಗ ಕೊಟ್ರ, ಭಾಳ ಮಂದಿ ಭಾಳ್ ಥರಾ ಬಿಡಸ್ತಾರ. ನನ್ನ ಅರ್ಧಾಂಗಿಗೆ, ಈ ಸುದ್ದಿ ಹೇಳಿದಮ್ಯಾಲ ಆಕಿ, ಇದನ್ನ "ಸಕ್ಕತ್ತಾಗಿ ಮಾಡಿದ ಮೋಸಾ." ಅಂದ್ರ, ನನ್ನ ಪ್ರಾಸದ ಗೆಳೆಯ ಬದ್ರಿ "ಸಮೋಸ ಮಾರಾಟಗಾರನ ಸರಿಯಾದ ಮೋಸ" ಅಂತ ಪೇಪರ್ ಹೆಡ್‍ಲೈನ್‍ಗತೆ ಹೇಳಿದ. ನನ್ನ ಲಂಗೂಟಿ (ಅದಕ್ಕಿಂತ ಹಳೆಯ!!) ದೋಸ್ತಿ ಪ್ರಶಾಂತಗ ಹೇಳಿದ್ರ, ಅವ "ಸಮೋಸಾ ಹುಡಗ ಛಂದಾಗೇ ಚಂಡಿಗೆ ಕೈ ಹಾಕಿದ", ಅಂತ ಶುದ್ದ ನಾಡ ಭಾಷಾದಾಗು ಉಲ್ಲೇಖಿಸಿಬಿಟ್ಟ. ಹಿಂಗ ಸಮೋಸಾ ನನ್ನ ಎಲ್ಲ ಆತ್ಮೀಯರಿಗೋ ಆತ್ಮೀಯ ಆತು ಅಂತ, ನಾನು ಒಂದೂ ಆತ್ಮಾವಲೋಕನಾ ಮಾಡದ, ಇದ ನನ್ನ ಲೇಖನಕ್ಕ ತಲಿಯಾಗಲಿ (Title) ಅಂತ ನಿರ್ಧರಿಸಿಯೂ ಬಿಟ್ಟೆ.

ಯಾವ ಶುಭಲಗ್ನದೊಳಗ ಈ ನಿರ್ಧಾರದ ಲಗ್ನಪತ್ರಿಕಿ ಹೊರಬಿತ್ತೋ, ನನ್ನ ಜೀವನದಾಗ ಹೊಸ ಹೊಸ ಮುಹೂರ್ತಗಳು ಬರಲಿಕ್ಕೆ ಚಾಲೂ ಆದವು. ಈ ಸಮೋಸಾದೊಳಗಿನ ಸ ಹೋಗಿ, ನನ್ನ ಹತ್ರ ಬರೀ ಮೋಸ  ಮತ್ತ ಅದನ್ನ ಮಾಡವ್ರು -  ಮಾರಾವ್ರು  ಬರಲಿಕತ್ರು. (ಆದ್ರ ಇದನ್ನ ನಾವು ೬೬% ಸಮೋಸಾ ಅಂತ ಕರೀಲಿಕ್ಕೆ ಸಾಧ್ಯ ಅದ ಏನು!!?).

ಇದಾದ ಒಂದು ವಾರದಲ್ಲಿ ನಮ್ಮ ಮನೆಯ ಕೆಳಗಡೆ ಮನೆಯವರ ಕಾರು ಪಂಕ್ಚರ್ ಆತು (ಇದಕ್ಕ ಮತ್ತ ಮ್ಯಾಲಿನ ಸಮೋಸಾ ಹುಡುಗಗ ಏನೂ ಸಂಬಂಧ ಇಲ್ಲ ಅಂತ ನನ್ನ ಅನಿಸಿಕೆ). ಅವ್ರು ಆ ಕಾರಿಗೆ ಒಬ್ಬ ಡ್ರೈವರನ್ನ ಇಟ್ಟ್ಕೊಂಡಿದ್ರು. ಅವ ನಮ್ಮ ಮನಿಗೆ ಆವಾಗಾವಾಗ ಬಂದು ಹೋಗಿನೂ ಮಾಡ್ತಿದ್ದ. ಅಮ್ಮ ಅವ ಬಂದಾಗ ನಾಕ್ಕಾಳು ಅವಲಕ್ಕಿ, ಒಂದು ಕಪ್ಪು ಚಹನೂ ಕೊಡ್ತಿದ್ಲು. ಆ ಭಿಡೇದೊಳಗ ನಾನು ಅವಗ ಆವಾಗಾವಾಗ ನಮ್ಮ ಕಾರ್ ಪಂಕ್ಚರ್ ಆದಾಗ ಅದನ್ನ ತಗಿಸಿಕೊಂಡು ಬರ್ಲಿಕ್ಕೂ ಹೇಳಿ, ಐವತ್ತು ರೋಪಾಯಿ ಕೈಗಿಡ್ತಿದ್ದೆ ("ಇದೆಂಥ ಭಿಡೆ ಮತ್ತ" ಅನ್ನಬ್ಯಾಡ್ರಿ ನೀವು.). ಅಂದಂಗ ಎಲ್ಲಿದ್ದೆ...??? ಹಾಂ.. ನಮ್ಮ ಕೆಳಮನಿಯವರ ಕಾರು ಪಂಕ್ಚರ್ ಆಗಿತ್ತು. ನಮ್ಮ ಈ ಡ್ರೈವೆರ್ ಸಾಹೆಬ್ರು ಬಂದು, "ಸಾ.. ನಮ್ಮ ಯಜ್‍ಮಾನ್ರ ಕಾರ್‍ ಪಂಚರ್ ಆಗೈತೆ.. ವಸಿ ಜಾಕ್ ಮತ್ತೆ ಟೆಂಪೊರೊರಿಯಾಗಿ ಸ್ಟೇಪ್ಣಿ ಬೇಕಿತ್ತು..." ಅಂತ ರಾಗ ಎಳೆದರು. ಕೆಳಮನಿ ಮನಷ್ಯಾ ನನಗೇನು ಭಯಂಕರ ಗುರುತಿನ್ಯಾವೇನಲ್ಲ. ಆವಾಗಾವಾಗ ಎದುರಿಗೆ ಸಿಕ್ರ "ಹಾಯ್" ಅನ್ನುವವರಂಗ ಮುಖಾಮಾಡಿದ್ರೂ, ಕೈಯ್ಯನ್ನೂ ಎತ್ತುವ ಪ್ರಯತ್ನ ಮಾಡದ ಮುಂದ ಹೋಗಿಬಿಡವಂಥವ. ಆದ್ರ, ಇಲ್ಲಿತನಕಾ ನಮಗ ಅವನಿಂದ ಯಾವ ತ್ರಾಸೋ ಆಗಿಲ್ಲ. ಹಿಂಗಾಗಿ, ಅವ ಛೊಲೋ ಮನಶ್ಯಾನ ಇರಬೇಕು ಅನ್ನುವ ಅಭಿಪ್ರಾಯ ನನ್ನೊಳಗಿತ್ತು. ಅಂತನ,  ನಾನು ಭಾಳ ವಿಚಾರ ಮಾಡದ ಅವಗ ನನ್ನ ಕಾರ ಚಾವಿ ಕೊಟ್ಟೆ. ಹತ್ತು ನಿಮಿಷ ಬಿಟ್ಟು ಹಂಗ ಒಮ್ಮೆ ’ಅವ ಏನು ಮಾಡ್ಲಿಕತ್ತಾನ’ ಅಂತ ನೋಡ್ಲಿಕ್ಕೂ ಹೋದೆ. ಅವ ನನ್ನ ಕಾರಿನಿಂದ ಜಾಕು ಮತ್ತು ಸ್ಟೇಪ್ಣಿ ತಗಿದಿಟ್ಕೊಂಡು ಅವರ ಕಾರಿನ ಗಾಲಿ ಬಿಚ್ಚಲಿಕತ್ತಿದ್ದ.

"ನಿಮ್ಮದು ಮುಗದ ಮೇಲೆ ಜಾಕು ಮತ್ತ ಬಿಚ್ಚಿದ ಗಾಲಿ ಗಾಡಿಯೊಳಗೆ ಹಾಕಿ, ಕೀ ತಂದುಕೊಡಿ", ಅಂತ ಹೇಳಿ ನಾನು, ನಮ್ಮ ಮನಿ ಸೇರಿಕೊಂಡೆ. ಅವತ್ತು ರವಿವಾರಿದ್ದದ್ದರಿಂದ ನಿದ್ದೀನು ಮಾಡ್ಬಿಟ್ಟೆ.
ಆರ್ಧಾ ತಾಸಾಗಿರಬೇಕು, ಅವ ಗಾಡೀ ಚಾವಿ ತಂಡುಕೊಟ್ಟು, ಇಂಗ್ಲೀಶ್ ಸ್ಟೈಲಿನ್ಯಾಗ "ಥ್ಯಾಂಕ್ಸ್ ಸರ್‍" ಅಂದ. ನಾನು ಮುಗುಳ್ನಕ್ಕು "ಇಲ್ಲೇ ಇರ್ತಿವಿ ಅಂದಮೇಲೆ, ಒಬ್ಬರಿಗೊಬ್ಬರು ಆಗಬೇಕಲ್ಲ" ಅಂದೆ. ಅವ ಹೊಂಟುಹೋದ, ನಾನು ಬಾಗಲ ಹಾಕಿ, ಮತ್ತ ನಿದ್ರಾರೂಢ ಅದೆ.

ಮರದಿನಾ, ಆಫೀಸಿಗೆ ಹೋಗಲಿಕ್ಕಂತ ಕಾರು ಬಾಗಿಲು ತಗದೆ. ಒಳಗಿದ್ದ ಸ್ಟೀರಿಯೋ ಮಂಗ ಮಾಯ!!! ಗಾಬರಿಯಾಗಿ, ಹಿಂದ ಹೋಗಿ ನೋಡಿದ್ರ  ಸ್ಟೇಪ್ಣಿನೂ ಇಲ್ಲ ಜಾಕೂ ಇಲ್ಲ. ಕಳಮನಿಯವನನ್ನ್ ಕೇಳಿದ್ರ, ಅವ - " ಹೆಯ್, ಅವ್ನು ಶುಕ್ರವಾರವೇ ಕೆಲಸ ಬಿಟ್ಟದ್ದಾಯಿತಲ್ಲ. ಅದೇನೋ, ಯಾವುದೂ ಗುಜರಾತಿನ ಲಾರಿ ಕಂಪನಿ ಸೇರಿಕೊಳ್ಳುತ್ತೇನೆನ್ನುತ್ತಿದ್ದ. ಅದಕ್ಕೆ, ನಾನು ಹೊಸ ಡ್ರೈವರಿಗಾಗಿ ಹುಡುಕುತ್ತಿದ್ದೆನೆ. ನಿಮಗೆ ಯಾರಾದರೂ ಗೊತ್ತುಂಟೋ?" ಅಂದ. ಆವನ ಹತ್ರ ಉತ್ತರಾ ಕೇಳಲಿಕ್ಕೆ ಹೋದ ನಾನು, ಅವನ ಪ್ರಶ್ನೆಗೆ ಉತ್ತರಾ ಕೊಡುವ ಪರಿಸ್ಥಿತಿಯೊಳಗ ಇಲ್ಲದ ಹೊರಳಿ ಬಂದು ಕಾರು ಹತ್ತಿದೆ.

ಮುಂದೆರಡು ತಿಂಗಳು ನನ್ನನ್ನ ಶುಕ್ರದೋಷ, ಶನಿಹಂಗ ಕಾಡಿತು.  ಎಲ್ಲಿದ್ದರೂ ನಾನು ಹತ್ತಾರು ಸಲ ಎಲ್ಲ ವಸ್ತುಗಳೂ ಇರಬೇಕಾದ ಜಾಗದೊಳಗ ಅವ ಅಂತ ದೃಢಪಡಿಸಿಕೊಂಡ ನಾನು ಮುಂದುವರಿತಿದ್ದೆ. ಇಷ್ಟಿದ್ದರೂ, ಯಾರ್ಯಾರಿಗೆ ನನ್ನಿಂದ ಏನೇನು ಪಾಲು ಮುಟ್ಟಬೇಕಿತ್ತೋ ಅದು ಮುಟ್ಟೇ ಮುಟ್ಟತಿತ್ತು. ಆಟೋ ದವರು ಡಬಲ್ ಮೀಟರ್ ಹಾಕಿದ್ರು; ಬ್ಯಾಂಕಿನವರು ಖೋಟಾ ನೋಟು ಕೊಟ್ಟರು; ಪೆಟ್ರೋಲ್ ಬಂಕಿನವರು ಅರ್ಧ ರೊಕ್ಕಕ್ಕಷ್ಟ ಪೆಟ್ರೋಲ್ ಹಾಕಿ, ಪೂರ್ತಿ ರೊಕ್ಕ ವಸೂಲಿಮಾಡಿದ್ರು; ಗುಡಿಯೊಳಗ ಚಪ್ಪಲ್ ತುಡಗ ಮಾಡಿದ್ರು; ಅಂತರ್ಜಲದೊಳಗ ಕೊಂಡ ಯಾವುದೋ ಪುಸ್ತಕ ನನ್ನ ಮನಿಗೆಂದೂ ಬಂದು ಸೇರಲೇ ಇಲ್ಲ. ಆದರೆ ನನ್ನ ಖಾತೆಯಿಂದ ರೊಕ್ಕ ಯಾವುದೋ ಇನ್ನೊಂದು ಖಾತೆ ಜಮಾನೂ ಆಗಿ ಹೋತು; ಎಲ್ಲ ದಾಖಲೆಗಳಿದ್ದರೂ, ’ನಾನು ಮೊಬೈಲ್ ಫೊನಿನಲ್ಲಿ ಮಾತಾಡ್ಲಿಕತ್ತಿದ್ದೆ’ ಅಂತ ಸುಳ್ಳು ಕಥೆ ಕಟ್ಟಿ ಟ್ರಾಫಿಕ್ ಪೋಲಿಸರು ರಸೀದಿ ಇಲ್ಲದೇ ಸುಲುಗೆಗೂ ಪ್ರಯತ್ನ ಮಾಡಿದ್ರು. ನಾನು, ರಸೀದಿ ಇಲ್ಲದ ರೊಕ್ಕಾ ಕೊಡೂದಿಲ್ಲ ಅಂದದಕ್ಕ, ನನ್ನ ಲೈಸನ್ಸಿನೊಳಗೂ ಎಂಟ್ರಿ ಮಾಡಿ, ಸಾವಿರ ರುಪಾಯಿಯ ರಸೀದಿನೂ ಹರದ್ರು.- ಒಂದೋ ಎರಡೋ... ಪೂರ್ವ ಜನ್ಮದ ನನ್ನ ನೂರಾರ ದಾಯಾದಿಗಳು ಅನೇಕಾನೇಕ ರೂಪಧರಿಸಿ, ಅವರವರ ಪಾಲು ಕಿತ್ಕೊಂಡ್ರು.

ಮೂರು ತಿಂಗಳು ಹಿಂಗ ಮುಗದು... ಮತ್ತ ನೋಡ್ರಿ... ಭೂಮಿ ಗುಂಡಗದ ಅಂತೀವಲ್ಲಾ.. ಹಂಗ, ಈ ದೇವೇಗೌಡ ಪೆಟ್ರೋಲ್ ಬಂಕ ದಾಟದ ಎಲ್ಲಿಗೂ ಹೋಗಲಿಕ್ಕೆ ಸಾಧ್ಯಾನ ಇಲ್ಲ ಏನೋ ಅನ್ನುವಹಂಗ, ಅವತ್ತ, ನಾ ಮತ್ತ ಅದ ಸಿಗ್ನಲ್ಲಿಗೆ ಬಂದು ನಿಂತೆ. ಈ ಸಲಾ, ಯಾರ ಹತ್ರನೂ ಮೋಸಾ ಮಾಡಿಸಿಕೊಳ್ಳಲಿಕ್ಕೆ ನಾ ತಯಾರಿಲ್ಲ ಅಂತ ನಾ ನನಗ ಹೇಳಿಕೊಂಡು, ಬೇಕಂತಲೇ ಖಿಡಕಿ ಇಳಿಸಿ ಕೂತೆ. ಆ ಕಡೆಯಿಂದ ಒಬ್ಬ ಹುಡುಗ ಬಂದ. ಕೈಯೊಳಗ ಸಮೋಸಾದ ಟ್ರೇ ಇತ್ತು. "ಬರ್ಲಿ ಮಕ್ಳು" ಅಂದುಕೊಳ್ಳಬೇಕಾದ್ರನ, ಆ ಹುಡುಗ ಬಂದು - "ಸಾರ್.. ಬಿಸಿ ಬಿಸಿ ಸಮೋಸಾ ತೊಗೊಳ್ಳಿ ಸಾರ್" ಅಂದ. ಆ ಎಳೆ ಮಗೂನ್ನ ನೋಡಿ ನನ್ನ ಕರಳು ಚುರ್ರ್ ಅಂತು.. ಒಂದು ಕ್ಷಣ ಎಲ್ಲಾ ಮರ್ತು, "ಒಂದು ಪ್ಲೇಟ್ ಕೊಡು" ಅಂದೆ. ಆದ್ರ, ಈ ಸಲ ರೊಕ್ಕ ಕೊಡಬೇಕಾದ್ರ ಹುಡುಕಿ, ಕಡಿಕ ಚಿಲ್ಲರ್ ಇಲ್ಲದ ಐವತ್ತರ ನೋಟು ಕೊಟ್ಟು, "ಐವತ್ತರದು" ಅಂತ ಸುತ್ತಲೂ ನಿಂತಿದ್ದ ಮೋಟಾರ್‍ಸೈಕಲ್ಲಿನವರಿಗೆಲ್ಲ ಕೇಳಿಸುವಂತೆ ಜೋರಾಗಿ ಹೇಳಿದೆ. ಆ ಹುಡುಗ ಒಂದುಸಲ ನನ್ನ ದಿಟ್ಟಿಸಿ ನೋಡಿದ. ಮತ್ತ "ಸಾರ್.. ಇನ್ನೆರಡು ಪ್ಲೇಟ್ ತೊಗೊಂಡ್ಬಿ.. ಅರವತ್ತಗುತ್ತೆ.. ಐವತ್ತಕ್ಕೆ ನಾನು ಕೊಡ್ತೀನಿ" ಅಂದ. ನಾನು "ಆಗ್ಲಿ" ಅಂದೆ. ಅವ ನನ್ನ ಐವತ್ತು ರುಪಾಯಿಯ ನೋಟನ್ನ ನನ್ನ ಕೈಗೆ ಕೊಟ್ಟು, ಆ ಒಂದು ಸಮೋಸಾ ಪಾಕೀಟನ್ನೂ ನನ್ನ ಕಾರಿನ್ಯಾಗ ಬಿಟ್ಟು, "ಕಾರ್ ಸೈಡಿಗೆ ಹಾಕಿ ಸಾರ್; ನಾನು ಇನ್ನೆರಡು ಪ್ಲೇಟ್ ಬಿಸೀ ಸಮೋಸಾ ತರ್ತೀನಿ" ಅಂತ ಅಂಗಡಿಕಡೆಗೆ ಓಡಿಹೋದ. ನಾನು, ನನ್ನ ಕಾರನ್ನ ಅಲ್ಲೇ ರೋಡಿನ ಬಾಜೂಕ್ಕ ಹಾಕಿ, ಸಮೋಸಾ ಪಾಕೀಟನ್ನು ಬಿಚ್ಚಿ ಮೇಯಲಿಕತ್ತೆ.

ಐದಿ ನಿಮಿಷದಾಗ ಅವ ತಿರಗಿ ಬಂದ. ಕೈಯೊಳಗ ಎರಡು ಪಾಕೀಟಿದ್ದವು. ಅವನ್ನ ನನ್ನ ಕೈಗೆ ಕೊಟ್ಟು, ಅವ ""ಸಾರ್.. ಬಿಸಿ ಸಮೋಸಾ ಮಾಡ್ತಾಯಿದ್ರು.. ಅದಕ್ಕೆ ಸ್ವಲ್ಪ ಟೈಮೆ ಆಯ್ತು" ಅಂದ. ನಾನು "ಏನು ಅಡ್ಡಿಯಿಲ್ಲ" ಅನ್ನುವವರಂಗ ನಕ್ಕು ಕೇಳಿದೆ, "ಅಲ್ವೋ, ಅಕಸ್ಮಾತ್ ನಾನು ಈ ಸಮೋಸಾ ಪ್ಯಾಕೆಟ್ ತೊಗೊಂಡು ಹೊರಟು ಹೋಗಿದ್ರೆ!!! ದುಡ್ಡಾದ್ರು ಒಯ್ಯೊದಲ್ವೇನೋ...??". ಹುಡುಗ, ನಕ್ಕು ನನ್ನ ಮುಖ ನೋಡಿದ. ನನಗ "ನಾನು ಅವಗ ಏನೋ ಒಂದು ನೀತಿ ಹೇಳಿದೆ. ಅದಕ್ಕ ಅವನ ತಪ್ಪು ಅವಗ ಈಗ ತಿಳದಿರಬೇಕು" ಅಂತ ಒಂದು ಸೆಕೆಂಡ್ ಹಮ್ಮು ಬಂತು. ನಾನು ಠೀವಿಯಿಂದ ಅವನ ಮುಖವನ್ನ ದಿಟ್ಟಿಸಿದೆ. ಅವ - "ಸಾರ್.. ಯಾರಿಗೆ ಯಾರು ಮೋಸಾ ಮಾಡಿದ್ರೂ ಅನ್ದನ್ನೇನು ಹೊತ್ಕೊಂಡಾ ಹೋಗ್ತರೆ..? ಅಲ್ಲದೇ, ನಮ್ಮ ದುಡಿತಕ್ಕೆ ಸಿಗೋದಷ್ಟೇ ನಮ್ಮ ಫಲ.. ಅಲ್ವಾ ಸಾ..??? ಕೆಲವೊಂದು ಸಲ ಜನ ದುಡ್ಡು ಕೊಡ್ದೆನೂ ಹೋಗಿದಾರೆ. ಹಾಗಂತ ಎಲ್ರ ಮೇಲೂ ಡೌಟ್ ಮಾಡೋಕಾಗುತ್ತಾ ಸಾರ್? ನಂಬಿಕೆ ಮುಖ್ಯಾ ಅಲ್ವಾ ಬದುಕೋಕೆ?" ಅಂದ..  ದಿಗ್ಮೂಢನಾಗಿ ನಾನು ಒಂದು ಕ್ಷಣ ನನ್ನನ್ನೇ ಮರೆತುಬಿಟ್ಟೆ. ನನಗ ಸುಧಾರಿಸಿಕೊಳ್ಳುವಷ್ಟರೊಳಗ ಆ ಹುಡುಗ ಮತ್ತ ಒದರ್ಕೋತ ಮುಂದ ಹೋಗ್ಬಿಟ್ಟ- "ಸಮೋಸಾ.. ಸಾರ್.. ಬಿಸಿ ಬಿಸಿ ಸಮೋಸಾ". ಸಿಗ್ನಲ್ಲು ಹಸಿರಾತು.

4 Comments:

At 11:09 PM, October 08, 2009 , Blogger VijayGadwal said...

Nice post maga...ending bhaaLa chalo ittu :)
anthoo sakathaagi kuri aagiddeya anthaatu! :P
vk ooru biTTu hoda mele ninge kuri antha karibahudu noDu!

 
At 11:56 PM, October 08, 2009 , Blogger Sumant S Kulkarni said...

bekadaShtu sala kuri aagidini.. Adre, illi bandirodella imaginationappa. Hinge endoo kuriyagilla.

Allade, VK ooru bido modale ninage Pattabhisheka maadi hodaddanna marteya gaadi? Raajadhiraaja, Kuri martanda, Kuri kulkadhipati, Kuri Kshetrapaalaka Gadwal avarige namaskara. :)

 
At 6:01 AM, October 10, 2009 , Blogger Sadhana said...

ಪುನರ್ಜನ್ಮ ಕೊಟ್ಟಿದ್ಯಾ ನಿನ್ನ blog ಗೆ. ಖುಷಿ ಆಯ್ತು ಓದಿ. ನಿಮ್ಮ ಕೆಳಗಿನ ಮನೆಯವರ ಬಗ್ಗೆ ಓದುವಾಗಲೇ ಈ ನಂಬಿಕೆ ಪದ ತಲೆಗೆ ಬಂತು. ಅದ್ನ್ ನೀನ್ ಕೊನೇಲಿ ಆ ಹುಡುಗ ಹೇಳ್ದ ಅಂತ ಬರ್ದಿದ್ಯ. ಸಹಜವಾಗಿ ಜನಗಳ ಬಗ್ಗೆ ನಂಬಿಕೆ ಬರುತ್ತೆ. ಆದ್ರೆ ಯಾರನ್ನ ಯಾವಾಗ ನಂಬಬಾರ್ದು ತೀರ್ಮಾನ ಕಷ್ಟ ಅಲ್ವಾ? ಆಗ್ಲೇ ಹೀಗೆಲ್ಲಾ ಆಗೋದು :) ಒಟ್ನಲ್ಲಿ ಲೇಖನ ಸ್ವಲ್ಪ ಹಾಸ್ಯ ಸ್ವಲ್ಪ ಯೋಚನಲಹರಿನ ಓದುಗನಿಗೆ ಕೊಡತ್ತೆ. :) Nice one

 
At 8:32 AM, October 14, 2009 , Blogger Sumant S Kulkarni said...

ಹೌದು.. ಯಾರನ್ನ ಯಾವಾಗ ನಂಬಬೇಕು? ದೊಡ್ಡ ಪ್ರಶ್ನೆ ಅಲ್ವಾ?..

ಆದ್ರೆ ಕೆಲವೊಂದು ಸಲ ಅನ್ಸುತ್ತೆ, ಎಲ್ಲರನ್ನೂ ನಂಬಿ ಬದುಕ್ದ್ರೆ, ಎಷ್ಟು ಚೆನ್ನಗಿರುತ್ತಲ್ವಾ. ಅದ್ರಲ್ಲಿ ಬೇಕಾದಷ್ಟು ಜನಾ ಮೋಸಾನೂ ಮಾಡ್ಬಹುದು. ಆದ್ರೆ, ಅದೂ ಸಹಾ ಸಾಮಾನ್ಯ ಅಲ್ವಾ? ನಾವು ಹೀಗೆ - ಬೇರೆಯವರು ನಮಗೆ ಮೋಸಾ ಮಾಡಿದ್ರು ಅಂತ ಅಂದುಕೊಂಡ್ರೆ, ನಮ್ಮ ಬಗ್ಗೆನೂ ಅನೇಕ ಜನಾ ಹೀಗೇ ಮಾತಡ್ತಿರಬಹುದಲ್ವಾ?

ಅದಕ್ಕೆ, ಮೋಸಾ ಅಂದ್ರೆ ಪರಿಸ್ಥಿತಿಯ ಇನ್ನೊಂದು ಫಲವೂ ಆಗಿರಬಹುದು. ಅದಕ್ಕೆ, ಈ ಅಪನಂಬಿಕೆ ಬೇರು ಬಿಡುವ ಮೊದಲು ಅದರ ಮೇಲೆ ನಂಬಿಕೆಯ ಗಿಡ ಬೆಳೆಯಬೇಕು. ಅಲ್ವಾ?

 

Post a Comment

Subscribe to Post Comments [Atom]

<< Home